Tuesday, 6 August 2019

ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

 ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ನವದೆಹಲಿಗೆ ಭೇಟಿ ನೀಡಿ, ಕೇಂದ್ರದಲ್ಲಿ ಬಾಕಿ ಇರುವ ರಾಜ್ಯದ ಬಾಕಿ ಪ್ರಸ್ತಾವನೆಗಳ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ, ಸಂಬಂಧಪಟ್ಟ ಕೇಂದ್ರ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
*ಪ್ರಧಾನ ಮಂತ್ರಿಗಳೊಂದಿಗೆ ಭೇಟಿ*  
ಇಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ನೀರಾವರಿ ಯೋಜನೆಗಳು ಮತ್ತು ಇತರ ವಿಷಯಗಳ ಕುರಿತು ಚರ್ಚಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-2ರ ವರದಿ ಹಾಗೂ ಮಹಾದಾಯಿ ಜಲ ವಿವಾದ ನ್ಯಾಯಾಧಿಕರಣದ ವರದಿಗಳನ್ನು ಗಜೆಟ್ ಅಧಿಸೂಚನೆ ಹೊರಡಿಸುವಂತೆ ಮತ್ತು ಮೇಕೆದಾಟು ಕುಡಿಯುವ ನೀರು ಕಂ ಬ್ಯಾಲೆನ್ಸಿಂಗ್ ರಿಸರ್ವಾಯರ್ ಯೋಜನೆಯ ಡಿಪಿಆರ್ ಅನುಮೋದಿಸುವಂತೆ ಮನವಿ ಮಾಡಿದರು.
ಜೊತೆಗೆ, ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3ನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ, ಆರ್ಥಿಕ ನೆರವು ನೀಡುವಂತೆಯೂ ಮನವಿ ಮಾಡಿದರು.
ಇದಲ್ಲದೆ, ಹುಬ್ಬಳ್ಳಿ-ಧಾರವಾಡದಲ್ಲಿ ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ ಸ್ಥಾಪಿಸುವಂತೆ ಕೋರಿದರು.
*ಕೇಂದ್ರ ಗ್ರಾಮೀಣಾಭಿವೃದ್ಧಿ & ಪಂಚಾಯತ್ ಸಚಿವ ನರೇಂದ್ರ ಸಿಂಗ್ ತೋಮರ್ ಅವರೊಂದಿಗೆ ಭೇಟಿ* :
ಕೇಂದ್ರ ಗ್ರಾಮೀಣಾಭಿವೃದ್ಧಿ & ಪಂಚಾಯತ್ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಇಂದು ಭೇಟಿ ಮಾಡಿದ ಮುಖ್ಯಮಂತ್ರಿಗಳು, ಪ್ರಧಾನಮಂತ್ರಿ ಪಸಲ್ ಭೀಮಾ ಯೋಜನೆ ಒಳಗೊಂಡಂತೆ ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ನೋಂದಣಿ ಅವಧಿಯನ್ನು ಆಗಸ್ಟ್ 14 ರ ವರೆಗೆ ವಿಸ್ತರಿಸುವಂತೆ ಮನವಿ ಮಾಡಿದರು.
ಇದಲ್ಲದೆ, ಬೆಳೆವಿಮೆಯ ಹಿಂದಿನ ಕ್ಲೇಮುಗಳನ್ನು ಇತ್ಯರ್ಥ ಪಡಿಸಲು ಕ್ರಮ ವಹಿಸುವಂತೆಯೂ ಮನವಿ ಮಾಡಿದರು. ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ 2019-20ರ ಅನುದಾನ ಬಿಡುಗಡೆ ಹಾಗೂ ರಾಜ್ಯ ಸರ್ಕಾರವು 2015-16, 2016-17 ಮತ್ತು 2019-20ರಲ್ಲಿ ಪಾವತಿಸಿರುವ ಮುಂಗಡ ಅನುದಾನವನ್ನು ಬಿಡುಗಡೆ ಮಾಡುವಂತೆ ಕೋರಿದರು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರಾಜ್ಯದ ಎಲ್ಲ ಅರ್ಹ ರೈತರಿಗೂ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.

*ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಭೇಟಿ*
ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾದ ಮುಖ್ಯಮಂತ್ರಿಗಳು ರಾಜ್ಯದ ಕೆಲವು ಪ್ರಮುಖ ಹೆದ್ದಾರಿ ಯೋಜನೆಗಳನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳುವಂತೆ ಹಾಗೂ ಶಿವಮೊಗ್ಗ ನಗರಕ್ಕೆ ವರ್ತುಲ ರಸ್ತೆ ನಿರ್ಮಿಸುವ ಯೋಜನೆಗೆ ಅನುಮೋದನೆ ನೀಡುವಂತೆ ಮನವಿ ಮಾಡಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರನ್ನು ಭೇಟಿ ಮಾಡಿ, ರಕ್ಷಣಾ ಇಲಾಖೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಿದರು.
*ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಭೇಟಿ*
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು  ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಹಣಕಾಸು ಸಚಿವಾಲಯದಲ್ಲಿ  ಬಾಕಿ ಇರುವ ವಿಷಯಗಳನ್ನು ಇತ್ಯರ್ಥಗೊಳಿಸುವಂತೆ ಕೋರಿದರು.
ಆದಾಯ ತೆರಿಗೆ ಕಾಯ್ದೆ 1961 ಪರಿಚ್ಛೇದ 10 (29 ಎ) ಅಡಿಯಲ್ಲಿ ರಾಜ್ಯ ಕಟ್ಟಡಗಳು ಮತ್ತು ಇತರೆ ಕಟ್ಟಡ ಕಾರ್ಮಿಕರ ಮಂಡಳಿಗಳನ್ನು ತಂದು ಆದಾಯ ತೆರಿಗೆ ವಿನಾಯ್ತಿ ನೀಡುವಂತೆ ಮನವಿ ಮಾಡಿದರು.
14ನೇ ಹಣಕಾಸು ಆಯೋಗದ ಅಡಿಯಲ್ಲಿ  ಸಾಧನೆ ಆಧಾರದ ಮೇಲೆ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಕೋರಿದರು.
*ಕರ್ನಾಟಕವನ್ನು ನಂ. 1 ರಾಜ್ಯವನ್ನಾಗಿಸೋಣ – ಬಿ.ಎಸ್.ಯಡಿಯೂರಪ್ಪ*
ನವದೆಹಲಿ, ಆಗಸ್ಟ್ 06 : ಕರ್ನಾಟಕವನ್ನು ದೇಶಕ್ಕೇ ನಂ. 1 ರಾಜ್ಯವನ್ನಾಗಿ ಮಾಡಲು ಕೇಂದ್ರದಿಂದ ಹೆಚ್ಚು ಹೆಚ್ಚಾಗಿ ನೆರವು ಪಡೆಯಲು ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರು, ಸಂಸತ್ ಸದಸ್ಯರು ಶ್ರಮಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ  ಕರೆ ನೀಡಿದರು. 
ನವದೆಹಲಿಯಲ್ಲಿ ಇಂದು ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರು, ಸಂಸತ್ ಸದಸ್ಯರ ಸಭೆಯಲ್ಲಿ  ಅವರು ಮಾತನಾಡುತ್ತಿದ್ದರು. 
“ಕೇಂದ್ರದಿಂದ ನಮ್ಮ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಬೆಂಬಲ ಪಡೆಯುವಲ್ಲಿ ನಿಮ್ಮೆಲ್ಲರ ಸಹಕಾರವನ್ನು ನಿರೀಕ್ಷಿಸುತ್ತಿದ್ದೇನೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳ ನಡುವಣ ಬಾಂಧವ್ಯ ಮಹತ್ವಪೂರ್ಣವಾದುದು. ಸಂಸತ್ತಿನಲ್ಲಿ ನಮ್ಮ ರಾಜ್ಯದ ನೆಲ, ಜಲ, ಭಾಷೆಯ ವಿಷಯದಲ್ಲಿ ಒಗ್ಗಟ್ಟಾಗಿ ಕಾರ್ಯನಿರ್ವಹಿಸುವುದು ಇಂದು ಅತಿ ಅಗತ್ಯವಾಗಿದೆ” ಎಂದರು.
ಮೂರು ದಿನಗಳ ನವದೆಹಲಿ ಭೇಟಿಯ ಅವಧಿಯಲ್ಲಿ ರಾಜ್ಯದ ವಿವಿಧ ಅಭಿವೃದ್ಧಿ ವಿಚಾರಗಳು ಹಾಗೂ ಕೇಂದ್ರ ಸರ್ಕಾರದಲ್ಲಿ ಬಾಕಿ ಇರುವ ಹಲವು ಪ್ರಸ್ತಾವನೆಗಳಿಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ಹಲವು ಸಚಿವರನ್ನು ಇಂದು ಭೇಟಿಯಾಗಿ ಚರ್ಚಿಸಿದ್ದೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಬಹಳ ದಿನಗಳಿಂದ ಬಾಕಿ ಇರುವ ಕನಿಷ್ಠ ಬೆಂಬಲ ಬೆಲೆಯ ಕೇಂದ್ರದ ಪಾಲಿನ ಅನುದಾನ, ಕಲ್ಲಿದ್ದಲು ಬ್ಲಾಕ್‍ಗಳ ಹಂಚಿಕೆ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಬಾಕಿ ಅನುದಾನ, ಹೀಗೆ ಹಲವಾರು ವಿಷಯಗಳ ಕುರಿತು ಕೇಂದ್ರದ ಸಚಿವರುಗಳ ಗಮನ ಸೆಳೆಯಲಾಗಿದೆ.

ರಾಜ್ಯದಲ್ಲಿ ಹಲವೆಡೆ ಬರದ ಛಾಯೆ ಇದ್ದು, ಉತ್ತರ ಕರ್ನಾಟಕದಲ್ಲಿ ಕೃಷ್ಣಾನದಿಯಲ್ಲಿ ಪ್ರವಾಹ ಉಂಟಾಗಿ 5 ಜಿಲ್ಲೆಗಳಲ್ಲಿ ಜನ ತೊಂದರೆಗೀಡಾಗಿದ್ದಾರೆ. ರಾಜ್ಯವು ವಿಪತ್ತು ನಿರ್ವಹಣೆಗೆ ಸಂಪೂರ್ಣವಾಗಿ ಸನ್ನದ್ಧವಾಗಿದೆ. ಸಂಕಷ್ಟಕ್ಕೆ ಒಳಗಾದ ಜನರಿಗೆ ಕೇಂದ್ರ ಸರ್ಕಾರದಿಂದ ಪರಿಹಾರ ಪಡೆಯುವಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರು, ಸಂಸತ್ ಸದಸ್ಯರ ಸಹಕಾರವೂ ಅಗತ್ಯ ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ತಿಳಿಸಿದರು.

No comments:

Post a Comment