‘ಕೇಂದ್ರ ಸರ್ಕಾರದ ತೆರಿಗೆ ನೀತಿ ಹಾಗೂ ದೇಶ ಎದುರಿಸುತ್ತಿರುವ ಆರ್ಥಿಕ ಹಿಂಜರಿತದಿಂದಾಗಿ ಕರ್ನಾಟಕ ರಾಜ್ಯದ ಸಣ್ಣ ಕೈಗಾರಿಕಾ ವಲಯ ಭಾಗಶಃ ಕುಸಿದು ಬಿದ್ದಿದ್ದು, ಸುಮಾರು ಆರು ಸಾವಿರ ಕೈಗಾರಿಕೆಗಳು ನಷ್ಟದಲ್ಲಿವೆ. ಇದರ ಪರಿಣಾಮವಾಗಿ ಶೀಘ್ರವೇ ರಾಜ್ಯದಲ್ಲಿ ಸುಮಾರು 15 ರಿಂದ 20 ಲಕ್ಷ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ.’
- ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ)ದ ಅಧ್ಯಕ್ಷ ಆರ್. ರಾಜು ಭವಿಷ್ಯ ನುಡಿದಿದ್ದಾರೆ!
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಅತ್ಯಂತ ಕಠಿಣ ಪರಿಸ್ಥಿತಿ ಎದುರಿಸುತ್ತಿವೆ. ಪರಿಸ್ಥಿತಿ ಇನ್ನೂ ಬಿಗಡಾಯಿಸುವ ಸಾಧ್ಯತೆಯಿದೆ. ಹೀಗಾದರೆ ಆಟೋ ಮೊಬೈಲ್, ಜವಳಿ ಸೇರಿದಂತೆ ಹಲವು ಉದ್ಯಮಗಳು ಭಾರೀ ಸಮಸ್ಯೆಗೆ ಸಿಲುಕಲಿವೆ. ಲಕ್ಷಾಂತರ ಉದ್ಯೋಗಗಳು ನಷ್ಟವಾಗಲಿದ್ದು, ದೇಶದ ಕೈಗಾರಿಕಾ ಹಬ್ ಎನಿಸಿರುವ ಬೆಂಗಳೂರು ನಗರವೊಂದರಲ್ಲೇ 10 ರಿಂದ 12 ಲಕ್ಷ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದರು.
ಈಗಾಗಲೇ ಮಾರುತಿ, ಹೀರೋ, ಮಹೀಂದ್ರ, ಟೊಯೋಟಾ ಸೇರಿದಂತೆ ಹಲವು ಕಂಪನಿಗಳ ಮಾರುಕಟ್ಟೆ ವಹಿವಾಟು ಕುಸಿದಿದ್ದು, ಉತ್ಪಾದನೆ ಕಡಿಮೆಯಾಗಿದೆ ಎಂದು ಆಯಾ ಕಂಪನಿಗಳೇ ಹೇಳಿಕೆ ನೀಡುತ್ತಿವೆ. ಆಟೋಮೊಬೈಲ್ ಉದ್ಯಮ ಸಂಕಷ್ಟದಲ್ಲಿ ಸಿಲುಕಿದೆ. ಇದನ್ನೇ ನಂಬಿಕೊಂಡಿದ್ದ ಬೈಕ್, ಕಾರು ಸೇರಿದಂತೆ ಇತರ ವಾಹನಗಳ ಉತ್ಪಾದಕರು, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ ಕೈಗಾರಿಕೆಗಳು ನೆಲಕಚ್ಚುವ ಪರಿಸ್ಥಿತಿ ಇದೆ. ಪ್ರಸ್ತುತ ಆಟೋಮೊಬೈಲ್ ಮತ್ತು ಟೆಕ್ಸ್‌ಟೈಲ್ಸ್ (ಗಾರ್ಮೆಂಟ್ಸ್) ಉದ್ಯಮ ನಂಬಿಕೊಂಡು ತಲಾ ಶೇ.40ರಷ್ಟುಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ನಡೆಯುತ್ತಿದ್ದು, ಆರ್ಥಿಕ ಹಿಂಜರಿತದಿಂದ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು ಇದೆ ಎಂದು ತಿಳಿಸಿದರು.
ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಪ್ರತಿ ತಿಂಗಳು ತಪ್ಪದೆ ಶೇ.18ರಷ್ಟುತೆರಿಗೆಯನ್ನು ಕಟ್ಟಲೇಬೇಕಿದೆ. ಬೃಹತ್ ಕೈಗಾರಿಕೆಗಳು ನೀಡುವ ಲೇಬರ್ ಮತ್ತು ಜಾಬ್ ವರ್ಕ್ಗೆ ಶೇ.18ರಷ್ಟು ಜಿಎಸ್‌ಟಿಯನ್ನು ಈ ಉದ್ಯಮಗಳು ಪಾವತಿ ಮಾಡಬೇಕು. ಆದರೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಂದ ಕೆಲಸ ಮಾಡಿಸಿಕೊಂಡ ಬೃಹತ್ ಕೈಗಾರಿಕೆಗಳು ನಿಗದಿತ ಅವಧಿಗೆ ಹಣವನ್ನು ಮರುಪಾವತಿಸುತ್ತಿಲ್ಲ. ಇದು ಉದ್ಯಮದ ಮೇಲೆ ದೊಡ್ಡ ಹೊಡೆತ ನೀಡಿದೆ. ಜಿಎಸ್‌ಟಿ ಜಾರಿಗೂ ಮುನ್ನ 10 ಲಕ್ಷ ರು.ಗಳ ವರೆಗೂ ರಿಯಾಯಿತಿ ಇತ್ತು. ಆ ನಂತರ ಸೇವಾ ತೆರಿಗೆ ಪಾವತಿ ಮಾಡಬೇಕಿತ್ತು. ಈಗ ಆ ರೀತಿಯ ಯಾವುದೇ ಸಲವತ್ತುಗಳು ಸಣ್ಣ ಕೈಗಾರಿಕೆಗಳಿಗೆ ಸಿಗುತ್ತಿಲ್ಲ ಎಂದು ಆರೋಪಿಸಿದರು.
ಕನಿಷ್ಠ ವೇತನ ನೀತಿ ಬದಲಿಸಿ: ಕನಿಷ್ಠ ವೇತನ ನೀತಿಯಿಂದಲೂ ಉದ್ಯಮಗಳಿಗೆ ಸಮಸ್ಯೆಯುಂಟಾಗಿದೆ. ಅದರಲ್ಲೂ ಜವಳಿ ಉದ್ಯಮದಲ್ಲಿ ಲಕ್ಷಾಂತರ ಕಾರ್ಮಿಕರು ದುಡಿಯುತ್ತಿದ್ದಾರೆ. ಅಲ್ಲೂ ಕೂಡ ಶೇ.18ರಷ್ಟುಜಿಎಸ್‌ಟಿ ಕಟ್ಟಬೇಕು. ಜತೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕನಿಷ್ಠ ವೇತನವನ್ನು ಕಾರ್ಮಿಕರಿಗೆ ಕೊಡಬೇಕಿದೆ. ಸಣ್ಣ ಕೈಗಾರಿಕೆಯಲ್ಲಿ 7ರಿಂದ 8 ಸಾವಿರ ರು. ವೇತನ ನೀಡಬೇಕಾದ ಜಾಗದಲ್ಲಿ ಕನಿಷ್ಠ ವೇತನ ನೀತಿಯಿಂದ 15 ಸಾವಿರ ರು.ಗಳನ್ನು ಕೊಡಬೇಕಾದ ಒತ್ತಡದಲ್ಲಿ ಉದ್ಯಮ ಸಿಲುಕಿದೆ. ಇದರಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮುಚ್ಚುವಂತಹ ಪರಿಸ್ಥಿತಿಗೆ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಾಲ ಖಾತರಿ ಹೆಚ್ಚಿಸಿ: ಹಾಗೆಯೇ ಸಣ್ಣ ಉದ್ದಿಮೆಗಳ ಕಾರ್ಯನಿರ್ವಹಣೆಗಾಗಿ ಸೂಕ್ತ ಹಣಕಾಸು ಸೌಲಭ್ಯದ ಅಗತ್ಯತೆ ಹಿನ್ನೆಲೆಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 5 ಕೋಟಿ ರು.ಗಳ ಸಾಲ ಖಾತರಿ ಹೆಚ್ಚಿಸಬೇಕು. ಸಿಜಿಟಿಎಂಎಸ್‌ಇ(ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್ ಫಾರ್ ಮೈಕ್ರೋ ಆ್ಯಂಡ್ ಸ್ಮಾಲ್ ಎಂಟರ್‌ಪ್ರೈಸಸ್) ಅಡಿ ನಿಯಮಗಳನ್ನು ಅನುಷ್ಠಾನಗೊಳಿಸುವಂತೆ ಬ್ಯಾಂಕುಗಳಿಗೆ ಸೂಚನೆ ನೀಡಬೇಕು. ಸರ್ಕಾರಗಳು 30 ದಿನಗಳ ಒಳಗೆ ಜಿಎಸ್‌ಟಿ ರೀಫಂಡ್ ಮಾಡಬೇಕು. ಅಭಿವೃದ್ಧಿಪಡಿಸಿದ ಕೈಗಾರಿಕಾ ಪ್ರದೇಶಗಳಲ್ಲಿ ಕಡಿಮೆ ಬೆಲೆಗೆ ನಿವೇಶನಗಳನ್ನು ಹಂಚಿಕೆ ಮಾಡಬೇಕು. ಬ್ಯಾಂಕುಗಳಿಂದ ಸಣ್ಣ ಉದ್ಯಮಕ್ಕೆ ಪಡೆದ ಸಾಲ ಮರುಪಾವತಿ ಅವಧಿಯನ್ನು 90 ದಿನಗಳ ಬದಲಿಗೆ 180 ದಿನಗಳಿಗೆ ವಿಸ್ತರಿಸಬೇಕು. ಉದ್ಯಮಕ್ಕೆ ಶೇ.4ರಷ್ಟುಬಡ್ಡಿಯಲ್ಲಿ ಸಾಲ ವಿಸ್ತರಣೆ ಮಾಡಬೇಕು. ಇದರಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಅವನತಿ ಹೊಂದುವುದನ್ನು ತಪ್ಪಿಸಬಹುದು ಎಂದು ಸಲಹೆ ನೀಡಿದರು
No comments:
Post a Comment