Friday, 6 October 2017

ಕಾಲೇಜು ಶಿಕ್ಷಣ ಇಲಾಖೆಯ ಪ್ರಾಂಶುಪಾಲರ ಹುದ್ದೆಗಳನ್ನು ನಿಯಮಾನುಸಾರ ಭರ್ತಿ ಮಾಡದೆ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಅಧ್ಯಾಪಕರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ.

 ಕಾಲೇಜು ಶಿಕ್ಷಣ ಇಲಾಖೆಯ ಪ್ರಾಂಶುಪಾಲರ ಹುದ್ದೆಗಳನ್ನು ನಿಯಮಾನುಸಾರ ಭರ್ತಿ ಮಾಡದೆ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಅಧ್ಯಾಪಕರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ.

ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ 412 ಸರ್ಕಾರಿ ಮತ್ತು 315 ಅನುದಾನಿತ ಪದವಿ ಕಾಲೇಜುಗಳು ಬರುತ್ತವೆ. ಈ ಕಾಲೇಜುಗಳ ಪ್ರಾಂಶುಪಾಲರ ಹುದ್ದೆಗಳನ್ನು ಕರ್ನಾಟಕ ಸರ್ಕಾರದ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಭರ್ತಿಮಾಡಬೇಕಿದೆ. ಪದವಿ ಕಾಲೇಜುಗಳಲ್ಲಿನ ಹಿರಿಯ ಅಧ್ಯಾಪಕರನ್ನು ಸೇವಾ ಜೇಷ್ಠತೆಯ ಮೇಲೆ ಪ್ರಾಂಶುಪಾಲರನ್ನಾಗಿ ಪದೋನ್ನತಿ (ಬಡ್ತಿ) ನೀಡುವ ವ್ಯವಸ್ಥೆ ಜಾರಿಯಲ್ಲಿದೆ. 


ಪ್ರಾಂಶುಪಾಲ ಹುದ್ದೆಗಳನ್ನು 1997ರಲ್ಲಿ ಸೃಜಿಸಿದ ಸರ್ಕಾರ ಸದರಿ ಹುದ್ದೆಗಳನ್ನು ಗ್ರೇಡ್‌ 1 ಮತ್ತು ಗ್ರೇಡ್‌ 2 ಎಂಬುದಾಗಿ ಪ್ರತ್ಯೇಕಿಸಿ ಪ್ರತ್ಯೇಕ ವೃಂದಗಳನ್ನಾಗಿಸಿದೆ.


 ಗ್ರೇಡ್‌ 1 ಪ್ರಾಂಶುಪಾಲರ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಅಧ್ಯಾಪಕರಿಗೆ ಪ್ರಾತಿನಿಧ್ಯವನ್ನು ನೀಡಿ, ಬಡ್ತಿ ನಿಯಮಗಳನ್ನು ಸರ್ಕಾರಿ ಆದೇಶ ಸಂಖ್ಯೆ ಇಡಿ 266 ಡಿಸಿಇ 2001 ದಿನಾಂಕ: 06.09.2002ರಂತೆ  ಭರ್ತಿ ಮಾಡಲಾಗಿತ್ತು. 1985ರ ಯುಜಿಸಿ ವೇತನ ಶ್ರೇಣಿಯನ್ನು 1989ರಲ್ಲಿ ಜಾರಿಗೊಳಿಸದ ಸರ್ಕಾರ ಪ್ರಾಂಶುಪಾಲರ ಹುದ್ದೆಯೂ ಸೇರಿದಂತೆ ಉಳಿದ ಇಲಾಖೆಯ ಆಡಳಿತಾತ್ಮಕ ಹುದ್ದೆಗಳನ್ನು ಕರ್ನಾಟಕ ಸರ್ಕಾರಿ ಸೇವಾ ನಿಯಮಗಳ ಅನ್ವಯ (ಸಿಸಿಎ) ಮುಂದುವರಿಸಿದೆ.


2006ರ ಯುಜಿಸಿ ವೇತನ ಶ್ರೇಣಿಯಲ್ಲಿ ಪ್ರಾಂಶುಪಾಲರ ಹುದ್ದೆಗಳಿಗೆ ಪಿಎಚ್‌ಡಿ ಪದವಿಯನ್ನು ನಿಗದಿಗೊಳಿಸಿ, ನೇರ ನೇಮಕಾತಿಯ ಮೂಲಕ ಭರ್ತಿ ಮಾಡಲು ನಿರ್ದೇಶಿಸಿದೆ. ಪ್ರೊಫೆಸರ್‌ ಹುದ್ದೆಗಳನ್ನು ಕಾಲೇಜು ಅಧ್ಯಾಪಕರಿಗೂ ಪದೋನ್ನತಿ ರೂಪದಲ್ಲಿ ನೀಡುವುದಕ್ಕೆ ಆದೇಶಿಸಲಾಗಿದ್ದರೂ ಈತನಕ ಪ್ರೊಫೆಸರ್‌ ಹುದ್ದೆಗಳನ್ನು ಸಹ ನೀಡಲಾಗಿಲ್ಲ. ಆದರೆ ಈ ನಿರ್ದೇಶನವನ್ನು ಕರ್ನಾಟಕ ಸರ್ಕಾರ ಪಾಲಿಸಿರುವುದಿಲ್ಲ. ನ್ಯಾಯಸಮ್ಮತವಾಗಿ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗಗಳ ಅಧ್ಯಾಪಕರಿಗೆ ನೀಡಿದ ಪ್ರಾತಿನಿದ್ಯವನ್ನು ನ್ಯಾಯಾಲಯಗಳ ತೀರ್ಪಿನ ನೆಪಮಾಡಿಕೊಂಡು 2009ರಿಂದ ಪ್ರಾಂಶುಪಾಲರ ಹುದ್ದೆಗಳಿಗೆ ಬಡ್ತಿ ನೀಡದೆ ಸ್ಥಗಿತಗೊಳಿಸಿದೆ. ನ್ಯಾಯಾಲಯದ ತೀರ್ಪುಗಳು ಸೇವಾನಿಯಮಗಳಿಗೆ ವಿರುದ್ಧವಾಗಿದ್ದು ಸರ್ಕಾರ ಜಾರಿಗೊಳಿಸಲಾಗದಂತಿದೆ. ಸೇವಾ ನಿಯಮಗಳನ್ನು ಪರಿಷ್ಕರಿಸಲು ಸರ್ಕಾರದ ಇಚ್ಛಾಶಕ್ತಿಯ ಕೊರತೆಯಿಂದಾಗಿ ಪ್ರಾಂಶುಪಾಲರ ಹುದ್ದೆಗಳ ಭರ್ತಿ ವಿಷಯವನ್ನು ನೆನೆಗುದಿಗೆ ತಳ್ಳಲಾಗಿದೆ. ಪ್ರಸ್ತುತ 400 ಸರ್ಕಾರಿ ಮತ್ತು 315 ಅನುದಾನಿತ ಪದವಿ ಕಾಲೇಜುಗಳಲ್ಲಿ ಖಾಯಂ ಪ್ರಾಂಶುಪಾಲರಿಲ್ಲದೆ ಶೈಕ್ಷಣಿಕ ಗುಣಮಟ್ಟವನ್ನು ಕಡೆಗಣಿಸಲಾಗಿದೆ.


2014ರಲ್ಲಿ ತಾತ್ಕಾಲಿಕವಾಗಿ ಹಿರಿಯ ಅಧ್ಯಾಪಕರನ್ನು ಅನ್ಯಕಾರ್ಯ ನಿಮಿತ್ತವೆಂಬುದಾಗಿ (ಓಓಡಿ) ಯಾವುದೇ ಸೌಲಭ್ಯಗಳಿಲ್ಲದೆ ಪ್ರಾಂಶುಪಾಲರ ಹುದ್ದೆಗಳಿಗೆ ಕೌನ್ಸಿಲಿಂಗ್‌ ಮೂಲಕ ನಿಯೋಜಿಸಿತು. ಇದನ್ನು ಅಧ್ಯಾಪಕರ ಸ್ವ ಇಚ್ಛೆಯ ಮೇರೆಗೆ ವರ್ಗಾವಣೆ/ ನಿಯೋಜನೆಯನ್ನು ಇತರ ಆರ್ಥಿಕ ಭತ್ಯೆಗಳಿಲ್ಲದೆ ತಾತ್ಕಾಲಿಕ ವ್ಯವಸ್ಥೆ ಎಂಬ ಷರತ್ತುಗಳನ್ನು ವಿಧಿಸಿ ನಿಯೋಜಿಸಲಾಯಿತು.


ಕಾಲೇಜು ಶಿಕ್ಷಣ ಇಲಾಖೆಯು ಈ ಮೂಲಕ ಕೆಟ್ಟ ಸಂಪ್ರದಾಯಕ್ಕೆ ಅವಕಾಶ ಮಾಡಿದ ಪರಿಣಾಮ 25– 30 ವರ್ಷಗಳ ಕಾಲ ಬೋಧಕರಾಗಿ ಕೆಲಸ ಮಾಡಿ ಪ್ರಾಂಶುಪಾಲರಾಗಿ ನಿಯೋಜಿತರಾದವರು ಯಾವುದೇ ಸೌಲಭ್ಯವಿಲ್ಲದೆ ಕಾರ್ಯನಿರ್ವಹಿಸಿದ್ದಾರೆ. ಅದರಲ್ಲಿ ಹಲವರು ನಿವೃತ್ತರಾದರೆ, ಅನೇಕರು ಬೋಧಕ ಹುದ್ದೆಗಳಿಗೆ ವಾಪಸ್ಸಾದರು. ಆದರೆ ಕೆಲವು ಪಟ್ಟಭದ್ರರು ಬೇರೆ– ಬೇರೆ ಪ್ರಭಾವಗಳನ್ನು ಬಳಸಿ ತಾತ್ಕಾಲಿಕ ವ್ಯವಸ್ಥೆಯಲ್ಲಿಯೇ ತಮಗೆ ಅನುಕೂಲವಾದ ಆಯಕಟ್ಟಿನ ಕಾಲೇಜುಗಳಲ್ಲಿ ಮತ್ತೆ ಮತ್ತೆ ಅನುಕೂಲಕರವಾದ ಸ್ಥಳಗಳಿಗೆ ನಿಯಮಬಾಹಿರವಾಗಿ ನಿಯೋಜಿಸಿಕೊಂಡು ಅಧಿಕಾರದ ಸ್ಥಾನಗಳಲ್ಲಿ ಸ್ಥಾಪಿತರಾಗಿರುತ್ತಾರೆ. ನಿಯಮಬಾಹೀರವಾದ ಈ ಕ್ರಮವು ಖಂಡನೀಯವಾಗಿದೆ. ಖಾಸಗಿ ಅನುದಾನಿತ ಕಾಲೇಜುಗಳಲ್ಲಂತೂ ಸರ್ಕಾರಿ ಆದೇಶಗಳನ್ನು ಪಾಲಿಸಿದೆ. ಸ್ವಜಾತಿ ಮತ್ತು ಧರ್ಮೀಯವರಿಗೆ ಮನ್ನಣೆ ನೀಡಿ ಸಾಮಾಜಿಕ ನ್ಯಾಯವನ್ನು ಗಾಳಿಗೆ ತೂರಲಾಗಿದೆ. 


ಸರ್ಕಾರಿ ಮತ್ತು ಖಾಸಗಿ ಅನುದಾನಿತ ಕಾಲೇಜುಗಳಲ್ಲಿನ ಬಹುಪಾಲು ಎಲ್ಲ ಪ್ರಾಂಶುಪಾಲರ ಹುದ್ದೆಗಳು ಖಾಲಿಯಿದ್ದು ಪರೀಕ್ಷಾರ್ಥ ಅವಧಿ ಮುಕ್ತಾಯವಾಗದ ಕಿರಿಯ ಅಧ್ಯಾಪಕರೂ ಪ್ರಭಾರಿ ಪ್ರಾಂಶುಪಾಲರಾಗಿದ್ದಾರೆ. 


ಈ ಬಗ್ಗೆ ಶಿಕ್ಷಣ ಸಚಿವರು, ಸಮಾಜ ಕಲ್ಯಾಣ ಸಚಿವರು, ಕಾನೂನು ಸಚಿವರು, ಗೃಹ ಸಚಿವರು ಸೇರಿದಂತೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ. ಅಧಿಕಾರಿಗಳೊಟ್ಟಿಗೆ ಸಭೆಗಳನ್ನು ನಡೆಸಿ ಸಮಸ್ಯೆಯನ್ನು ಇತ್ಯರ್ಥ ಪಡಿಸುವುದಾಗಿ ಭರವಸೆಗಳನ್ನು ನೀಡಿದ್ದರೂ ಅದು ಇಲ್ಲಿವರೆಗೆ ಕಾರ್ಯರೂಪಕ್ಕೆ ಬಂದಿರುವುದಿಲ್ಲ. 


ಈ ರೀತಿಯ ಸನ್ನಿವೇಶದಲ್ಲಿ ಪ್ರಾಂಶುಪಾಲರ ಹುದ್ದೆಗಳನ್ನು ತುಂಬುವುದಕ್ಕೆ ಇಚ್ಛಾಶಕ್ತಿಯನ್ನು ತೋರದ ಸರ್ಕಾರ ಮತ್ತೊಮ್ಮೆ 2014ರಲ್ಲಿನ ತಾತ್ಕಾಲಿಕ ಓಓಡಿ ವ್ಯವಸ್ಥೆಯಲ್ಲಿ ನಿಯೋಜಿಸಿದಂತೆ ಪ್ರಾಂಶುಪಾಲರನ್ನು ನಿಯೋಜಿಸಲು 09.10.2017ರಂದು ಕೌನ್ಸಿಲಿಂಗ್‌ ನಡೆಸುವುದಕ್ಕೆ ಆದೇಶ ಹೊರಡಿಸಿದೆ. ಇದು ಇಡೀ ಅಧ್ಯಾಪಕ ಸಮುದಾಯಕ್ಕೆ ನ್ಯಾಯಬದ್ಧವಾಗಿ ನೀಡಬೇಕಾದ ಹುದ್ದೆಗಳನ್ನು ನೀಡದೆ ಅಗೌರವ ತೋರಿಸಿರುವುದೂ ಅಲ್ಲದೆ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗದ ಅಧ್ಯಾಪಕರನ್ನು ಸಾಮಾಜಿಕ ನ್ಯಾಯದಿಂದ ದೂರವಿಟ್ಟಂತಾಗಿದೆ. ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸಮಸ್ಯೆಯನ್ನು ವೃಂದ ಮತ್ತು ನೇಮಕಾತಿ ನಿಯಮಗಳ ಮೂಲಕ ಬಗೆಹರಿಸದೆ ಸಮಸ್ಯೆಯನ್ನು ಮುಂದೂಡುತ್ತಾ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗಗಳಿಗೆ ಅನ್ಯಾಯವೆಸಗುತ್ತಾ ಯಥಾಸ್ಥಿತಿಯನ್ನು ಮುಂದುವರಿಸುವ ಕ್ರಮವನ್ನು ಸಂಘವು ಖಂಡಿಸುತ್ತದೆ. ಓಓಡಿ ಪದ್ಧತಿಯ ಮೂಲಕ ಪ್ರಾಂಶುಪಾಲರನ್ನು ನಿಯೋಜಿಸುವ ಆದೇಶವನ್ನು ಕೂಡಲೇ ರದ್ದುಪಡಿಸಿ ಶೀಘ್ರದಲ್ಲಿ ಖಾಯಂ ಪ್ರಾಂಶುಪಾಲರನ್ನು ಸೇವಾನಿಯಮಗಳ ಅನ್ವಯ ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ಪರಿಷ್ಕರಿಸಿ ಭರ್ತಿ ಮಾಡಬೇಕೆಂದು ಒತ್ತಾಯಿಸುತ್ತದೆ. ತಪ್ಪಿದಲ್ಲಿ ತೀವ್‍ರವಾದ ಪ್ರತಿಭಟನೆಯನ್ನು ಸಂಘವು ಕೈಗೊಳ್ಳುತ್ತದೆ. 


ಈ ವಿಷಯವನ್ನು ತಮ್ಮ ಮಾಧ್ಯಮಗಳಲ್ಲಿ ಉನ್ನತ ಶಿಕ್ಷಣದಲ್ಲಿನ ಗೊಂದಲಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ಸಾಮಾಜಿಕ ನ್ಯಾಯವು ನಿರಾಕರಣೆಗೊಂಡಿರುವುದನ್ನು ಪ್ರಕಟಿಸುವ ಮೂಲಕ ಸರ್ಕಾರವನ್ನು ಎಚ್ಚರಿಸಿ ನ್ಯಾಯಸಮ್ಮತವಾದ ರೀತಿಯಲ್ಲಿ ಸಮಸ್ಯೆ ಬಗೆಹರಿಯಲು ಸಹಕರಿಸಬೇಕೆಂದು ಮನವಿ ಮಾಡುತ್ತೇವೆ.

No comments:

Post a Comment