ಫೋರ್ಬ್ಸ್ ಇಂಡಿಯಾ-2017 ಟಾಪ್ 100 ಶ್ರೀಮಂತರ ಪಟ್ಟಿಯನ್ನು ಗುರುವಾರ ಪ್ರತಿಷ್ಠಿತ ಫೋರ್ಬ್ಸ್ ನಿಯತಕಾಲಿಕೆ ಪ್ರಕಟಿಸಿದೆ. ಸತತ 10ನೇ ವರ್ಷವೂ ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿ ಅವರು 2.5 ಲಕ್ಷ ಕೋಟಿ ರು. ಸಂಪತ್ತಿನೊಂದಿಗೆ ಮೊದಲ ಸ್ಥಾನ ಪಡೆದಿದ್ದಾರೆ.
ಕಳೆದ ಸಲದಂತೆಯೂ ಈ ಸಲ ಕೂಡ 7 ಕನ್ನಡಿಗರು ದೇಶದ ಟಾಪ್ 100 ಶ್ರೀಮಂತರಲ್ಲಿ ಸ್ಥಾನ ಪಡೆದಿರುವುದು ವಿಶೇಷವಾಗಿದೆ. ಈ ಸಲ ಬೆಂಗಳೂರಿನ ವಿಪ್ರೋ ಕಂಪನಿಯ ಮುಖ್ಯಸ್ಥ ಅಜೀಂ ಪ್ರೇಮ್‌ಜಿ 1.25 ಲಕ್ಷ ಕೋಟಿ ರು. ಆಸ್ತಿಯೊಂದಿಗೆ ದೇಶದ ‘ಶ್ರೀಮಂತ ನಂ.2’ ಎನ್ನಿಸಿಕೊಂಡಿದ್ದಾರೆ. ಕಳೆದ ಸಲಕ್ಕಿಂತ ಅವರು ಈ ಬಾರಿ 2 ಸ್ಥಾನ ಮೇಲೇರಿದ್ದಾರೆ.
ಪಟ್ಟಿಯಲ್ಲಿ ಸ್ಥಾನ ಪಡೆದ ಇನ್ನಿತರರ ಕನ್ನಡಿಗರೆಂದರೆ ಬಿ.ಆರ್. ಶೆಟ್ಟಿ, ಕಿರಣ್ ಮಜುಂದಾರ್ ಶಾ, ರಂಜನ್ ಪೈ, ಎನ್.ಆರ್. ನಾರಾಯಣಮೂರ್ತಿ, ನಂದನ್ ನಿಲೇಕಣಿ ಹಾಗೂ ಎಸ್. (ಕ್ರಿಸ್) ಗೋಪಾಲಕೃಷ್ಣನ್.
ಏರಿಳಿತ:
2016ರಲ್ಲಿ 4ನೇ ಸ್ಥಾನದಲ್ಲಿದ್ದ ಅಜೀಂ ಪ್ರೇಮ್'ಜಿ, ಸುಮಾರು 98 ಸಾವಿರ ಕೋಟಿ ರು. ಆಸ್ತಿ ಹೊಂದಿದ್ದರು. ಈ ಸಲ ಅವರ ಸಂಪತ್ತು 1.25 ಲಕ್ಷ ಕೋಟಿ ರು.ಗೆ ನೆಗೆದಿದ್ದು, ದ್ವಿತೀಯ ಸ್ಥಾನಕ್ಕೇರಿದ್ದಾರೆ. ಹೋದ ಬಾರಿ 47ನೇ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ ಮೂಲದ ದುಬೈ ಉದ್ಯಮಿ ಬಿ.ಆರ್. ಶೆಟ್ಟಿ ಈ ಸಲ 34ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಅವರ ಆಸ್ತಿ ಮೌಲ್ಯ 16 ಸಾವಿರ ಕೋಟಿ ರು.ನಿಂದ 26 ಸಾವಿರ ಕೋಟಿ ರು.ಗೆ ಏರಿದೆ.
ಬಯೋಕಾನ್'ನ ಕಿರಣ್ ಮಜುಂದಾರ್ ಶಾ ಅವರು 2016ರಲ್ಲಿ 65ನೇ ಸ್ಥಾನದಲ್ಲಿದ್ದರು ಹಾಗೂ 12 ಸಾವಿರ ಕೋಟಿ ರು. ಆಸ್ತಿ ಹೊಂದಿದ್ದರು. ಆದರೆ ಈ ಬಾರಿ ಅವರ ಆಸ್ತಿ 15 ಸಾವಿರ ಕೋಟಿ ರು.ಗೆ ಏರಿದ್ದರೂ 8 ಸ್ಥಾನದಷ್ಟು, ಅಂದರೆ 72ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಮಣಿಪಾಲ್ ಸಮೂಹದ ರಂಜನ್ ಪೈ ಅವರು 12.5 ಸಾವಿರ ಕೋಟಿ ರು. ಆಸ್ತಿಯೊಂದಿಗೆ ಈ ಬಾರಿ 80ನೇ ಸ್ಥಾನ ಅಲಂಕರಿಸಿದ್ದಾರೆ. ಕಳೆದ ಬಾರಿ ಅವರು 11 ಸಾವಿರ ಕೋಟಿ ರು. ಆಸ್ತಿಯೊಂದಿಗೆ 74ನೇ ಸ್ಥಾನ ಪಡೆದಿದ್ದರು.
ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರು ಕಳೆದ ಬಾರಿ 62ನೇ ಸ್ಥಾನದಲ್ಲಿದ್ದರು ಹಾಗೂ 12 ಸಾವಿರ ಕೋಟಿ ರು. ಆಸ್ತಿ ಹೊಂದಿದ್ದರು. ಈ ಸಲ ಅವರು ಹೆಚ್ಚೂ ಕಮ್ಮಿ ಇಷ್ಟೇ ಆಸ್ತಿ ಉಳಿಸಿಕೊಂಡಿದ್ದರೂ 84ನೇ ಸ್ಥಾನಕ್ಕೆ ಇಳಿದಿದ್ದಾರೆ. ಇನ್ಫೋಸಿಸ್'ನ ನಂದನ್ ನಿಲೇಕಣಿ ಅವರು ಕಳೆದ ಬಾರಿ 80ನೇ ಸ್ಥಾನದಲ್ಲಿದ್ದರು ಹಾಗೂ ಸುಮಾರು 10 ಸಾವಿರ ಕೋಟಿ ರು. ಆಸ್ತಿ ಹೊಂದಿದ್ದರು. ಈ ಸಲ ಅವರು 89ನೇ ಸ್ಥಾನಕ್ಕೆ ಕುಸಿದಿದ್ದರೂ ಆಸ್ತಿ ಮೌಲ್ಯವನ್ನು 11 ಸಾವಿರ ಕೋಟಿ ರು.ಗೆ ಹೆಚ್ಚಿಸಿಕೊಂಡಿದ್ದಾರೆ.
ಕಳೆದ ಸಲ 81ನೇ ಸ್ಥಾನ ಪಡೆದಿದ್ದ ಇನ್ಫೋಸಿಸ್'ನ ಎಸ್. ಗೋಪಾಲಕೃಷ್ಣನ್ ಅವರು ಕಳೆದ ಸಲದಂತೆ ಈ ಸಲ 10 ಸಾವಿರ ಕೋಟಿ ರು. ಆಸ್ತಿಯನ್ನೇ ಉಳಿಸಿಕೊಂಡಿದ್ದರೂ, 92ನೇ ಸ್ಥಾನಕ್ಕೆ ಕುಸಿದಿದ್ದಾರೆ.
No comments:
Post a Comment