Thursday, 3 August 2017

ಪಾಲಿಕೆ ಬೊಕ್ಕಸಕ್ಕೆ ಸುಮಾರು 200 ಕೋಟಿ ರೂ. ನಷ್ಟ

ಬೆಂಗಳೂರು, ಆ.3- ಕಸ ವಿಲೇವಾರಿ ಅವ್ಯವಹಾರದಲ್ಲಿ ಮೇಯರ್ ಜಿ.ಪದ್ಮಾವತಿ ಅವರು ಶಾಮೀಲಾಗಿದ್ದು, ಇದರಿಂದ ಪಾಲಿಕೆ ಬೊಕ್ಕಸಕ್ಕೆ ಸುಮಾರು 200 ಕೋಟಿ ರೂ. ನಷ್ಟ ಸಂಭವಿಸುತ್ತದೆ. ಈ ನಷ್ಟಾನ ಕಾಂಗ್ರೆಸ್‍ನೋರು ಭರಿಸ್ತಾರಾ ಎಂದು ಪ್ರಶ್ನಸಿರುವ ಪ್ರತಿ ಪಕ್ಷದ ನಾಯಕ ಪದ್ಮನಾಭರೆಡ್ಡಿ, ಇಡೀ ಪ್ರಕರಣವನ್ನು ಹಾಲಿ ನ್ಯಾಯಾಧೀಶರ ನೇತೃತ್ವದ ಸಮಿತಿಯಿಂದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

ಕಸವಿಲೇವಾರಿ ಗುತ್ತಿಗೆಗೆ ಟೆಂಡರ್ ಕರೆಯದೆ ಸರ್ವೀಸ್ ಪ್ರೊವೈಡರ್ ಮೂಲಕ ಕಸ ವಿಲೇವಾರಿ ಮಾಡಿಸುತ್ತಿರುವುದರಿಂದ ಸರ್ಕಾರಕ್ಕೆ ಶೇ.15ರಷ್ಟು ಸರ್ವೀಸ್ ಟ್ಯಾಕ್ಸ್ ಕಟ್ಟಬೇಕು. ಇದು ಮೇಯರ್ ಪದ್ಮಾವತಿ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರ ಬೇಜವಾಬ್ದಾರಿತನದ ಪರಮಾವಧಿ. ಇದÀರಿಂದ ಸರ್ಕಾರಕ್ಕೆ ಸರ್ವೀಸ್‍ಚಾರ್ಜ್ ಮೂಲಕ 200 ಕೋಟಿಗೂ ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಈ ಹಣ ತೆರಿಗೆದಾರರ ದುಡ್ಡು. ಹಾಗಾಗಿ ಮೇಯರ್ ನಗರದ ನಾಗರಿಕರಿಗೆ ಉತ್ತರ ನೀಡಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ರೆಡ್ಡಿ ಆಗ್ರಹಿಸಿದರು.

ನಾನು ಕಳೆದ ಹಲವಾರು ಸಭೆಗಳಲ್ಲಿ ಕಸವಿಲೇವಾರಿ ಗುತ್ತಿಗೆ ಕರೆಯಬೇಕೆಂದು ಒತ್ತಾಯ ಮಾಡಿದ್ದೆ. ಆದರೆ, ಆಡಳಿತ ನಡೆಸುತ್ತಿರುವವರು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಸರ್ವೀಸ್ ಪ್ರೊವೈಡರ್ ಮೂಲಕ ಕಸ ವಿಲೇವಾರಿ ಮಾಡಿಸುತ್ತಿರುವುದರಿಂದ 200 ಕೋಟಿ ರೂ. ಹೊರೆ ಬಿದ್ದಿದೆ. ಇವರು ಬೆಂಗಳೂರು ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ. ಕಸ ವಿಲೇವಾರಿ ಘಟಕಗಳನ್ನು ಮುಚ್ಚಿಸಿದ್ದಾರೆ. ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುತ್ತಿಲ್ಲ. ಕೇವಲ ಹಣ ಲಪಟಾಯಿಸುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದು ದೂರಿದರು. ಸ್ಟೀಲ್‍ಬ್ರಿಡ್ಜ್ ನಿಲ್ಲಿಸಿದ್ದರಿಂದ ಕಮಿಷನ್‍ನಿಂತಿಹೋಗಿದೆ ಎಂದುಕೊಂಡು ಕಸದಲ್ಲಿ ಹಣ ಮಾಡಲು ಹರಟಿದ್ದಾರೆ. ಹೀಗಾಗಿ ಮೇಯರ್ ಪದ್ಮಾವತಿ ಹಾಗೂ ಜಾರ್ಜ್ ಅವರು ನಾಗರದ ನಾಗರಿಕರಿಗೆ ಸಮಜಾಯಿಷಿ ನೀಡಬೇಕೆಂದು ಒತ್ತಾಯಿಸಿದರು.

ವಾಲಿಬಾಲ್‍ನಲ್ಲೂ ಅವ್ಯವಹಾರ:

ಮೇಯರ್‍ಕಪ್‍ವಾಲಿಬಾಲ್ ಕ್ರೀಡೆ ಆಯೋಜಿಸಬೇಕಾದರೆ ಕಾನೂನು ಬದ್ಧವಾಗಿ ಉಪಸಮಿತಿ ರಚಿಸಬೇಕು. ಆ ಸಮಿತಿಗಳು ಸಭೆ ನಡೆಸಿ ಯಾವ್ಯಾವುದಕ್ಕೆ ಎಷ್ಟು ಹಣ ವೆಚ್ಚ ಮಾಡಬೇಕೆಂದು ನಿರ್ಧರಿಸಬೇಕು. ಆದರೆ, ಮೇಯರ್ ಪದ್ಮಾವತಿಯವರು ಪಾಳೆಗಾರಿಕೆ ನೀತಿ ಅನುಸರಿಸಿ ಆಯುಕ್ತರ ಮೇಲೆ ಒತ್ತಡ ತಂದು ಒಂದು ಕೋಟಿ ರೂ. ಹಣ ಬಿಡುಗಡೆ ಮಾಡಿಸಿಕೊಂಡು ಅಷ್ಟೂ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಪದ್ಮನಾಭರೆಡ್ಡಿ ಮತ್ತೊಂದು ಗಂಭೀರ ಆರೋಪ ಮಾಡಿದರು.

ಶಾಸಕರು, ಸ್ಥಳೀಯ ಜನಪ್ರತಿನಿಧಿಗಳನ್ನು ಕಡೆಗಣಿಸಿ ಕಾಂಗ್ರೆಸ್ ಕಪ್ ವಾಲಿಬಾಲ್ ಪಂದ್ಯಾವಳಿಯನ್ನು ಇವೆಂಟ್‍ಮ್ಯಾನೆಜ್‍ಮೆಂಟ್ ಮೂಲಕ ನಡೆಸಿದ್ದಾರೆ. ಇದರ ಮಾಲೀಕರು ಯಾರು ? ಅವರಿಗೆ ಪಂದ್ಯಾವಳಿ ನಡೆಸಲು ಅನುಮತಿ ಕೊಟ್ಟವರು ಯಾರು ? ಇದೆಲ್ಲದರ ಬಗ್ಗೆ ಮೇಯರ್ ಅವರು ಉತ್ತರ ಕೊಡಬೇಕೆಂದು ಒತ್ತಾಯಿಸಿದರು. ಒಟ್ಟಾರೆ ಕಸ ವಿಲೇವಾರಿ ಮತ್ತು ವಾಲಿಬಾಲ್ ಪಂದ್ಯಾವಳಿಯಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದ್ದು, ಈ ಎರಡು ಅವ್ಯವಹಾರಗಳ ಬಗ್ಗೆ ಸೂಕ್ತ ನ್ಯಾಯಾಂಗ ತನಿಖೆ ನಡೆಸಬೇಕೆಂದು ರೆಡ್ಡಿ ಆಗ್ರಹಿಸಿದರು.

ಐಟಿ ರೇಡ್‍ಗೂ ಬಿಜೆಪಿಗೂ ಸಂಬಂಧವಿಲ್ಲ:

ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಮನೆ ಮೇಲೆ ನಡೆದಿರುವ ಐಟಿ ರೇಡ್‍ಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಆದಾಯ ತೆರಿಗೆ ಅಧಿಕಾರಿಗಳು ಅವರಿಗೆ ಬಂದ ಮಾಹಿತಿ ಆಧರಿಸಿ ದಾಳಿ ಮಾಡಿದ್ದಾರೆ. ಇದರ ಬಗ್ಗೆ ಪ್ರತಿಪಕ್ಷಗಳು ಮಾಡುತ್ತಿರುವ ಆರೋಪ ನಿರಾಧಾರ ಎಂದು ಇದೇ ವೇಳೆ ಪದ್ಮನಾಭರೆಡ್ಡಿ ತಿಳಿಸಿದರು.

No comments:

Post a Comment