Tuesday 15 August 2017

ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಇಂದು

ಬೆಂಗಳೂರು, ಆ.15- ವಿವಿಧ ಧರ್ಮಗಳ ಪ್ರವಾಸಿಗರು ತಮ್ಮ ಪುಣ್ಯಕ್ಷೇತ್ರಗಳಿಗೆ ಕಡಿಮೆ ವೆಚ್ಚದಲ್ಲಿ ಭೇಟಿ ನೀಡಲು ಅನುಕೂಲವಾಗುವಂತೆ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಬಸ್‍ಗಳಲ್ಲಿ ರಿಯಾಯಿತಿ ದರದಲ್ಲಿ ಸಂಚರಿಸಲು ಅವಕಾಶ ಕಲ್ಪಿಸುವ ಪುನೀತ ಯಾತ್ರೆ ಯೋಜನೆ ಬಂಡವಾಳಗಾರರನ್ನು ಆಕರ್ಷಿಸಲು ನವೆಂಬರ್‍ನಲ್ಲಿ ಹೂಡಿಕೆದಾರರ ಶೃಂಗಸಭೆ, ವರ್ತಕರ ಅಭಿವೃದ್ಧಿ ಮೇಳ,  ರಾಯಚೂರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ, ಮುಚ್ಚಿರುವ ಉರ್ದು ಶಾಲೆಗಳ ಪುನರಾರಂಭಕ್ಕೆ ಮೌಲಾನಾ ಆಜಾದ್ ಹೆಸರಿನಲ್ಲಿ ವಸತಿ ಶಾಲೆಗಳ ಪ್ರಾರಂಭ, ಮೂರೂವರೆ ಸಾವಿರ ಗ್ರಾಮ ಪಂಚಾಯಿತಿಗಳಿಗೆ ವೈ-ಫೈ ಸೌಲಭ್ಯ ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 71ನೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸಮಗ್ರ ಉನ್ನತ ಶಿಕ್ಷಣವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಲು ವಿಶೇಷವಾದ ಜ್ಞಾನ ನಗರ ಸ್ಥಾಪಿಸಲು ಯೋಜನೆ ಪ್ರಾರಂಭಿಸಲಾಗಿದೆ.  ಮಹಾತ್ಮ ಗಾಂಧೀಜಿಯವರ 150ನೆ ಜನ್ಮ ವರ್ಷಾಚರಣೆ ಅಂಗವಾಗಿ ಅಕ್ಟೋಬರ್ 2ರಿಂದ ರಾಜ್ಯದ ಎಲ್ಲ ಅಂಗನವಾಡಿಗಳಿಗೂ ಮಾತೃಪೂರ್ಣ ಯೋಜನೆ ಅಂದರೆ ಬಾಣಂತಿಯರಿಗೆ, ಗರ್ಭಿಣಿಯರಿಗೆ ಮಧ್ಯಾಹ್ನದ ಬಿಸಿಯೂಟದ ಯೋಜನೆಯನ್ನು ವಿಸ್ತರಿಸಲು ನಿರ್ಧರಿಸಲಾಗಿದ್ದು, ಸುಮಾರು 12 ಲಕ್ಷ ಜನ ಇದರ ಲಾಭ ಪಡೆಯಲಿದ್ದಾರೆ ಎಂದು ಹೇಳಿದರು.

ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನ ನೀಡುವ ಉದ್ದೇಶದಿಂದ ರಾಯಚೂರು ವಿಶ್ವವಿದ್ಯಾಲಯ ಸ್ಥಾಪಿಸಿ ರಾಯಚೂರು, ಯಾದಗಿರಿ ಜಿಲ್ಲೆಗಳ ಎಲ್ಲ ಕಾಲೇಜುಗಳನ್ನು ಈ ವಿಶ್ವವಿದ್ಯಾಲಯ ವ್ಯಾಪ್ತಿಗೆ ತರಲಾಗುವುದು ಎಂದರು. ರಾಜ್ಯದ ಅಡುಗೆ ಅನಿಲ ಸಂಪರ್ಕ ಇಲ್ಲದ ಕುಟುಂಬಗಳಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಕಲ್ಪಿಸಿ ರಾಜ್ಯವನ್ನು ಸೀಮೆಎಣ್ಣೆ ಮುಕ್ತ ರಾಜ್ಯವನ್ನಾಗಿ ರೂಪಿಸಲು ಪರಿಣಾಮಕಾರಿ ಕ್ರಮ ಕೈಗೊಂಡಿರುವ ಬಗ್ಗೆ ಸಿಎಂ ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಸ್ತಾಪಿಸಿದರು.

ತಾಂತ್ರಿಕ ಶಿಕ್ಷಣದಲ್ಲಿ ವಿದ್ಯಾರ್ಥಿನಿಯರ ದಾಖಲಾತಿ ಪ್ರಮಾಣ ಹೆಚ್ಚಿಸಲು ಪ್ರಸಕ್ತ ಸಾಲಿನಲ್ಲಿ ಸರ್ಕಾರಿ ಪಾಲಿಟೆಕ್ನಿಕ್‍ನಲ್ಲಿ 23 ಹೊಸ ಹಾಸ್ಟೆಲ್‍ಗಳ ಸ್ಥಾಪನೆ ಮಾಡಲು ಉದ್ದೇಶಿಸಲಾಗಿದೆ. ಸರ್ಕಾರಿ ಮತ್ತು ಅನುದಾನಿತ ಎಂಜಿನಿಯರಿಂಗ್ ಪಾಲಿಟೆಕ್ನಿಕ್ ಪ್ರಥಮ ದರ್ಜೆ ಕಾಲೇಜುಗಳಿಗೆ ಪ್ರವೇಶ ಪಡೆಯುವ 1.5 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್ ವಿತರಿಸುವ ಮೂಲಕ ತಂತ್ರಜ್ಞಾನ ಆಧಾರಿತ ಶಿಕ್ಷಣಕ್ಕೆ ಆದ್ಯತೆ, ಉದ್ಯೋಗ ಮಾರುಕಟ್ಟೆಯ ಅಗತ್ಯಕ್ಕೆ ತಕ್ಕಂತೆ ಕೌಶಲ್ಯ ವೃದ್ಧಿ ಮಾಡಿ ಯುವಜನತೆಯನ್ನು ತರಬೇತುಗೊಳಿಸಲಾಗುತ್ತದೆ ಎಂದು ಹೇಳಿದರು.

2020ಕ್ಕೆ 2ನೆ ಹಂತದ ಮೆಟ್ರೋ ಪೂರ್ಣ:

ಇತ್ತೀಚೆಗಷ್ಟೆ 42.3 ಕಿಲೋ ಮೀಟರ್ ಉದ್ದದ ಮೊದಲನೆ ಹಂತದ ಮೆಟ್ರೋ ರೈಲು ಯೋಜನೆಯನ್ನು ನಮ್ಮ ರಾಷ್ಟ್ರಕ್ಕೆ ಸಮರ್ಪಿಸಿದ್ದು, ಎರಡನೆ ಹಂತದ 72 ಕಿಲೋ ಮೀಟರ್ ಮೆಟ್ರೋ ಜಾಲದ ಅನುಷ್ಠಾನದ ಕಾಮಗಾರಿಗಳು ಭರದಿಂದ ಸಾಗಿದ್ದು, 2020ರ ವೇಳೆಗೆ 2ನೆ ಹಂತವು ಪೂರ್ಣಗೊಳ್ಳಲಿದೆ.  ಬೆಂಗಳೂರು ಜಲಮಂಡಳಿ ತ್ಯಾಜ್ಯ ಸಂಸ್ಕರಣೆಯತ್ತ ದಿಟ್ಟ ಹೆಜ್ಜೆ ಇರಿಸಿದ್ದು, 2020ರ ವೇಳೆಗೆ ನೂರಕ್ಕೆ ನೂರರಷ್ಟು ತ್ಯಾಜ್ಯ ನೀರನ್ನು ಸಂಸ್ಕರಿಸುವ ಗುರಿ ಹೊಂದಲಾಗಿದೆ. ಬೆಂಗಳೂರಿನ ಕೆರೆಗಳ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಅವರು ಹೇಳಿದರು.

ಇಂದಿರಾ ಕ್ಯಾಂಟಿನ್‍ಗೆ ಚಾಲನೆ:

ಶ್ರಮಿಕ ವರ್ಗ, ಬಡ ವಲಸಿಗರ ಹಸಿವು ನೀಗಿಸುವ ಉದ್ದೇಶದಿಂದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟಿನ್ ಯೋಜನೆಗೆ ನಾಳೆಯೇ ಚಾಲನೆ ನೀಡಲಾಗುತ್ತಿದ್ದು, ಉದ್ದೇಶಿತ 198 ಇಂದಿರಾ ಕ್ಯಾಂಟಿನ್‍ಗಳ ಪೈಕಿ ಮೊದಲ ಹಂತದಲ್ಲಿ 101 ಇಂದಿರಾ ಕ್ಯಾಂಟಿನ್‍ಗಳು ಪ್ರಾರಂಭವಾಗಲಿವೆ ಎಂದು ಹೇಳಿದರು.  ರಾಜ್ಯದಲ್ಲಿ ಶಿಕ್ಷಣ ಹಕ್ಕು ಕಾಯ್ದೆಯನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲಾಗುತ್ತಿದೆ. ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಹಾಲು, ಅಂಗನವಾಡಿ ಮಕ್ಕಳಿಗೆ ಮೊಟ್ಟೆ , ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಬೈಸಿಕಲ್, ವಿದ್ಯಾಸಿರಿ ಯೋಜನೆಗೆ ಸಹಾಯ ಧನ ಒದಗಿಸಲಾಗುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಸಣ್ಣ ನೀರಾವರಿ, ಸಹಕಾರಿ ಕ್ಷೇತ್ರ, ವಿದ್ಯುತ್ ಸಬ್ಸಿಡಿ, ಹಾಲಿನ ಪ್ರೋತ್ಸಾಹ ಧನ ಹಾಗೂ ಸಾಲದ ಮೇಲಿನ ಬಡ್ಡಿ ಮನ್ನಾ, ಸಹಾಯ ಧನ ಸೇರಿದಂತೆ 40 ಸಾವಿರ ಕೋಟಿ ರೂ.ಗಳನ್ನು ರೈತರ ಏಳಿಗೆಗೆ ನಿಗದಿಪಡಿಸಲಾಗಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಶೂನ್ಯ ಬಡ್ಡಿದರದಲ್ಲಿ 3 ಲಕ್ಷದವರೆಗೆ ಸಾಲ, ಶೇ.3ರ ಬಡ್ಡಿದರದಲ್ಲಿ 10 ಲಕ್ಷದವರೆಗೆ ಸಾಲ ನೀಡಲಾಗುತ್ತಿದೆ. ಅಲ್ಲದೆ, ರಾಜ್ಯದ 22,27,506 ರೈತರ ಒಟ್ಟು 8605 ಕೋಟಿ ರೂ.ಗಳ ಸಹಕಾರಿ ಬ್ಯಾಂಕ್‍ಗಳ ಸಾಲ ಮನ್ನಾ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

No comments:

Post a Comment