ಇಂಧನ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಅವರ ಆಪ್ತರ ಮನೆಗಳ ಮೇಲೆ ದಾಳಿ ನಡೆಸಿರುವ ತೆರಿಗೆ ಇಲಾಖೆ ಅಧಿಕಾರಿಗಳು ಮೂರನೇ ದಿನವು ಶೋಧ ಕಾರ್ಯ ಮುಂದುವರಿಸಿದ್ದಾರೆ. ಅದರೊಂದಿಗೆ ಡಿ.ಕೆ ಶಿವಕುಮಾರ್ ಅವರ ಜಾಲ ಜಾಲಾಟ ಸದ್ಯಕ್ಕೆ ನಿಲ್ಲುವ ಸೂಚನೆಗಳು ಸಿಗುತ್ತಿಲ್ಲ.
ತೆರಿಗೆ ಇಲಾಖೆ ಅದಿಕಾರಿಗಳು ಈ ಮಟ್ಟದಲ್ಲಿ ತಪಾಸಣೆ ನಡೆಸುತ್ತಿರೋದು ನೋಡಿದರೆ, ಮುಂದೆ ಡಿಕೆ ಶಿವಕುಮಾರ್ ಅವರ ಮೇಲೆ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಸಹ ಪ್ರವೇಶಿಸುವ ಸಾಧ್ಯತೆಗಳು ದಟ್ಟವಾಗುತ್ತಿವೆ. ಕಾನೂನಿನ ಪ್ರಕಾರ ₹ 30 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಆಸ್ತಿ ಪತ್ತೆಯಾದರೆ ಆ ಪ್ರಕರಣ ಸಹಜವಾಗಿಯೇ ಡಾರಿ ನಿರ್ದೇಶನಾಲಯದ ವ್ಯಾಪ್ತಿಗೆ ಬರುತ್ತದೆ. ಈಗಾಗಲೇ ಡಿಕೆ ಶಿವಕುಮಾರ್ ಅವರ ಮನೆಯಲ್ಲಿ ಕೋಟ್ಯಂತರ ಹಣ ಸಿಕ್ಕಿರುವ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಯಾವುದೇ ಸಮಯದಲ್ಲಿ ಬೇಕಾದರೂ ಈ ಪ್ರಕರಣವನ್ನು ತನ್ನ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಇನ್ನು ಇಂದು ನಡೆದ ಪ್ರಮುಖ ಬೆಳವಣಿಗೆಗಳತ್ತ ಒಮ್ಮೆ ನೋಡುವುದಾದರೆ, ಅವು ಹೀಗಿವೆ…
ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವ ಬಗ್ಗೆ ಮಾಧ್ಯಮಗಳ ಬಳಿ ಪ್ರತಿಕ್ರಿಯೆ ನೀಡಿದ ಡಿ.ಕೆ ಶಿವಕುಮಾರ್ ಅವರ ತಾಯಿ ಗೌರಮ್ಮ, ಇದರ ಹಿಂದೆ ಕೇವಲ ಬಿಜೆಪಿ ಮಾತ್ರವಲ್ಲ ಕಾಂಗ್ರೆಸ್ ನಾಯಕರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈವಾಡವೂ ಇದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳು ಮುಖ್ಯಮಂತ್ರಿಗಳ ಬಳಿ ಕೇಳಿದಾಗ ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಇನ್ನು ಈ ಬಗ್ಗೆ ಸ್ಪಷ್ಟನೆ ನೀಡಿದ ಶಿವಕುಮಾರ್ ಅವರ ಸಹೋದರ ಡಿ.ಕೆ ಸುರೇಶ್, ‘ನಮ್ಮ ತಾಯಿ ಮೋದಿ ಅವರ ಹೆಸರು ಹೇಳಲು ಹೋಗಿ ಸಿದ್ದರಾಮಯ್ಯನವರ ಹೆಸರು ಹೇಳಿದ್ದಾರೆ. ಐಟಿ ಅಧಿಕಾರಿಗಳು ತಮ್ಮ ತಾಯಿಗೆ ಹೆಚ್ಚು ಗೊಂದಲ ಮಾಡಿಸಿದ್ದಾರೆ. ಆ ಗೊಂದಲದಲ್ಲಿ ಬಾಯಿ ತಪ್ಪಿ ನಮ್ಮ ತಾಯಿ ಸಿದ್ದರಾಮಯ್ಯನವರ ಹೆಸರು ಹೇಳಿದ್ದಾರೆ’ ಎಂದು ಹೇಳಿದರು.ಇಂದು ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಲು ತೆರಳಿದ ಡಿ.ಕೆ ಸುರೇಶ್ ಅವರನ್ನು ಆರಂಭದಲ್ಲಿ ಮನೆಯ ಒಳಗೆ ಬಿಡದೇ ಗೇಟ್ ಬಳಿಯೆ ಕೆಲ ಕಾಲ ನಿಲ್ಲಸಲಾಯಿತು. ನಂತರ ಅವರನ್ನು ಮನೆಯೊಳಗೆ ಬಿಡಲಾಯಿತು. ಆದರೆ ಕೋಣೆಯೊಳಗೆ ಡಿ.ಕೆ ಶಿವಕುಮಾರ್ ಅವರ ವಿಚಾರಣೆ ನಡೆಸಿ ಸುರೇಶ್ ಅವರು ಶಿವಕುಮಾರ್ ಅವರನ್ನು ಭೇಟಿ ಮಾಡಲು ಅವಕಾಶ ನೀಡಲಿಲ್ಲ.ಇಂದು ಬೆಳಗ್ಗೆ ಡಿ.ಕೆ ಶಿವಕುಮಾರ್ ಅವರ ಆರೋಗ್ಯದಲ್ಲಿ ವ್ಯತ್ಯಾಸವಾಗಿರುವ ಬಗ್ಗೆಯೂ ವರದಿಗಳು ಬಂದಿತ್ತಾದರೂ ನಂತರ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಯಿತು. ಈ ಬಗ್ಗೆ ಸುರೇಶ್ ಅವರು ಸಹ ಶಿವಕುಮಾರ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿ ಯಾವುದೇ ತೊಂದರೆ ಇಲ್ಲ ಎಂದರು.ಮೂರನೇ ದಿನವು ಡಿ.ಕೆ ಶಿವಕುಮಾರ್ ಅವರ ಸದಾಶಿವನಗರದ ಮನೆ, ಮೈಸೂರಿನಲ್ಲಿರುವ ಅವರ ಮಾವ ತಿಮ್ಮಯ್ಯ ಅವರ ಮನೆಯಲ್ಲಿ ತಪಾಸಣೆ ಮುಂದುವರಿಸಿದ ಐಟಿ ಅಧಿಕಾರಿಗಳು ಅವರ ಬಳಿ ಮತ್ತಷ್ಟು ಪ್ರಶ್ನೆಗಳನ್ನು ಕೇಳಿದರು. ಈ ವಿಚಾರಣೆ ವೇಳೆ ಮೈಸೂರಿನ ವಿವಿಧ ಬ್ಯಾಂಕುಗಳಲ್ಲಿರುವ ಲಾಕರ್ ಗಳ ಬಗ್ಗೆ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಲು ತಿಮ್ಮಯ್ಯನವರು ಸತಾಯಿಸಿದರೂ ಅಂತಿಮವಾಗಿ ಆ ಬಗ್ಗೆ ಮಾಹಿತಿ ನೀಡಿದರು. ಆ ಲಾಕರ್ ಪರಿಶೀಲನೆ ನಡೆಸಿದ ಅಧಿಕಾರಿಗಳು ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ತಿಮ್ಮಯ್ಯ ಅವರಿಗೆ ಸಂಬಂಧಿಸಿದ್ದ ಎಲ್ಲಾ ವ್ಯವಹಾರಗಳನ್ನು ಸದ್ಯಕ್ಕೆ ನಿಲ್ಲುಸುವಂತೆ ಸೂಚನೆ ನೀಡಲಾಗಿದೆ.ಮಧ್ಯಾಹ್ನದ ವೇಳೆ ಐಟಿ ಅಧಿಕಾರಿಗಳು ಡಿ.ಕೆ ಶಿವಕುಮಾರ್ ಅವರ ಮತ್ತೊಬ್ಬ ಆಪ್ತ ಶರ್ಮಾ ಟ್ರಾವೆಲ್ಸ್ ಮಾಲೀಕ ಸುನೀಲ್ ಕುಮಾರ್ ಶರ್ಮಾ ಅವರ ಮನೆ ಮೇಲೂ ದಾಳಿ ಮಾಡಿದರು. ಈ ದಾಳಿ ವೇಳೆ ಸುನೀಲ್ ಅವರು ವಿವಿಧ ಬ್ಯಾಂಕುಗಳಲ್ಲಿ 16 ಲಾಕರ್ ಹೊಂದಿರುವ ಮಾಹಿತಿ ಬೆಳಕಿಗೆ ಬಂದಿದ್ದು, ಇವುಗಳನ್ನು ಕೂಲಂಕುಶವಾಗಿ 8 ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ. ಈ ಲಾಕರ್ ಗಳ ಜತೆಗೆ ಮನೆಯಲ್ಲಿರುವ ನೆಲ ಮಾಳಿಗೆಯಲ್ಲೂ ಶೋಧ ಕಾರ್ಯ ನಡೆಸುತ್ತಿದ್ದಾರೆ. ಇನ್ನು ಡಿ.ಕೆ ಶಿವಕುಮಾರ್ ಅವರ ಮತ್ತೊಬ್ಬ ಆಪ್ತ ವಿನಯ್ ಕಾರ್ತಿಕ್ ಅವರನ್ನು ಗೌಪ್ಯ ಸ್ಥಳದಲ್ಲಿಟ್ಟಿರುವ ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಲೇ ಇದ್ದಾರೆ.ಇಂದು ಡಿ.ಕೆ ಶಿವಕುಮಾರ್ ಅವರ ಮನೆಯಲ್ಲಿ ನಡೆಯುತ್ತಿರುವ ವಿಚಾರಣೆಯ ಕುರಿತಂತೆ ಯಾವುದೇ ಮಾಹಿತಿ ಸೋರಿಕೆಯಾಗದಂತೆ ತಡೆಯಲು ಐಟಿ ಅಧಿಕಾರಿಗಳು ಮೊಬೈಲ್ ಜಾಮರ್ ಗಳನ್ನು ಅಳವಡಿಸಿದ್ದಾರೆ.ಡಿ.ಕೆ ಶಿವಕುಮಾರ್ ಅವರ ದೆಹಲಿಯ ಸಬ್ದರ್ ಜಂಗ್ ನಲ್ಲಿರುವ ನಿವಾಸದಲ್ಲಿ ₹ 100, 500 ಹಾಗೂ 2000 ಮುಖಬೆಲೆಯ ನೋಟುಗಳ ಕಂತೆಗಳ ರಾಶಿ ಸಿಕ್ಕಿದ್ದು, ಇವುಗಳ ಮೊತ್ತ ₹ 8 ಕೋಟಿಗೂ ಹೆಚ್ಚಾಗಿದೆ ಎಂದು ಮಾಹಿತಿ ಬಂದಿವೆ.
No comments:
Post a Comment