ಶ್ರೀರಂಗಪಟ್ಟಣ: 12 ವರ್ಷಗಳಿಗೊಮ್ಮೆ ತುಲಾ ರಾಶಿಗೆ ಗುರು ಪ್ರವೇಶ ಮಾಡುತ್ತಿರುವ ಶ್ರೇಷ್ಠ ದಿನವಾದ ಮುಂದಿನ ಮಂಗಳವಾರ (ಸೆ. 12) ಮಾಹಾ ಪುಷ್ಕರಣೆ ದಿನ. ಆ ದಿನ ಕಾವೇರಿ ನದಿಯಲ್ಲಿ ಮಿಂದವರಿಗೆ ಪುಣ್ಯ ಪ್ರಾಪ್ತಿಯ ನಂಬಿಕೆ. ಈ ಹಿನ್ನೆಲೆ ಲಕ್ಷಾಂತರ ಭಕ್ತರು ಶ್ರೀರಂಗಪಟ್ಟಣಕ್ಕೆ ಆಗಮಿಸಲಿದ್ದಾರೆ. ಪುಷ್ಕರಣೆಗೆ ಸಾಕ್ಷಿಯಾಗಲಿದ್ದಾರೆ.
ಕಳೆದ ವರ್ಷ ಕನ್ಯಾ ರಾಶಿಗೆ ಗುರು ಪ್ರವೇಶವಾಗಿತ್ತು. ಕೃಷ್ಣ ನದಿಯಲ್ಲಿ ಮಹಾಪುಷ್ಕರಣೆ ನಡೆದಿತ್ತು. ಈಗ ಸೆ. 12ರಂದು ಗುರು, ತುಲಾ ರಾಶಿಗೆ ಪ್ರವೇಶವಾಗುತ್ತಿದ್ದಾನೆ. ಕಾವೇರಿ ನದಿಯಲ್ಲಿ ಮಹಾ ಪುಷ್ಕರಣೆಗೊಳ್ಳಲಿದೆ ಎಂಬ ಸಂಗತಿ ಆಸ್ತಿಕರಿಗೆ ಭಕ್ತಿಯ ಪರಾಕಾಷ್ಠೆ ನೀಡಿಲಿದೆ.
ಪುಷ್ಕರಣೆ ಯಾವಾಗ, ಎಲ್ಲಿ?
ಪ್ರತಿ ವರ್ಷ ಅಥವಾ 6 ತಿಂಗಳಿಗೊಮ್ಮೆ ಗುರು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡುತ್ತಾನೆ. ಆ ಸಮಯದಲ್ಲಿ ಭಾರತದ ಏಳು ಪವಿತ್ರ ನದಿಗಳೂ ಸೇರಿದಂತೆ ಪುಣ್ಯ ನದಿಗಳಲ್ಲಿ ಮಿಂದರೆ ಭಕ್ತರ ಪಾಪ, ಸಂಕಷ್ಟಗಳು ಪರಿಹಾರವಾಗುತ್ತವೆ ಎಂಬ ನಂಬಿಕೆಯ ತಳಹದಿಯಲ್ಲಿ ಪುಷ್ಕರಣೆಯ ಆಚರಣೆ ನಡೆದುಕೊಂಡು ಬಂದಿದೆ.
ಗುರು ಗ್ರಹವು ಮೇಷ ರಾಶಿಗೆ ಪ್ರವೇಶಿಸಿದಾಗ ಗಂಗಾ ನದಿ, ವೃಷಭ ರಾಶಿಗೆ ಗುರು ಪ್ರವೇಶಿಸಿದಾಗ ನರ್ಮದಾ ನದಿ, ಮಿಥುನಕ್ಕೆ ಪ್ರವೇಶವಾದಾಗ ಸರಸ್ವತಿ ನದಿ, ಕರ್ಕಾಟಕ ರಾಶಿಗೆ ಪ್ರವೇಶಿದರೆ ಯಮುನಾ ನದಿ, ಸಿಂಹ ರಾಶಿಗೆ ಪ್ರವೇಶಿಸಿದಾಗ ಗೋದಾವರಿ ನದಿ, ಕನ್ಯಾ ರಾಶಿಗೆ ಪ್ರವೇಶಿಸಿದಾಗ ಕೃಷ್ಣಾ ನದಿ, ತುಲಾ ರಾಶಿಗೆ ಪ್ರವೇಶಿಸಿದಾಗ ಕಾವೇರಿ ನದಿ, ಗುರು ಗ್ರಹ ವೃಶ್ಚಿಕ ರಾಶಿಗೆ ಪ್ರವೇಶಿಸಿದರೆ ಭೀಮಾ ನದಿ, ದನಸ್ಸು ರಾಶಿಗೆ ಪ್ರವೇಶಿಸಿದಾಗ ತಪತಿ, ಮಕರ ರಾಶಿಗೆ ಪ್ರವೇಶಿಸಿದಾಗ ತುಂಗಭದ್ರ, ಕುಂಭ ರಾಶಿಗೆ ಪ್ರವೇಶಿಸಿದಾ ಸಿಂಧು, ಮತ್ತು ಮೀನ ರಾಶಿಗೆ ಪ್ರವೇಶಿಸಿದಾಗ ಮಹಾನದಿ ಪುಷ್ಕರವಾಗುತ್ತದೆ.
12 ವರ್ಷಕ್ಕೊಮ್ಮೆ ಪುಷ್ಕರಣೆ:
ಗುರು ಗ್ರಹ ಸೆ. 12 ರಂದು ತುಲಾ ರಾಶಿಗೆ ಪ್ರವೇಶಿಸಲಿದೆ. ಕಾವೇರಿ ನದಿ ಎಲ್ಲ ದೇವತೆಗಳ ಶಕ್ತಿಯನ್ನು ಪಡೆದುಕೊಂಡು ಪುಷ್ಕರವಾಗುತ್ತದೆ. ಈ ಪುಷ್ಕರದ ಅವಧಿ 12 ದಿವಸಗಳು. ಭಾರತದ ಸಪ್ತ ಪುಣ್ಯ ನದಿಗಳಲ್ಲಿ ಕಾವೇರಿ ನದಿ ಸಹ ಒಂದು. ಕಾವೇರಿ ನದಿಯ ಪ್ರದಕ್ಷಿಣೆ ಒಂದು ಅತಿ ಪಾವನ ಕಾರ್ಯವೂ ಹೌದು ಎನ್ನುತ್ತಾರೆ. ಪುಷ್ಕರ ಅವಧಿಯಲ್ಲಿ ಕಾವೇರಿ ನದಿಯಲ್ಲಿ ಮಿಂದರೆ ಪಾಪ ನಾಶವಾಗಿ, ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಪುನಃ ಪುಷ್ಕರ ಬರಲು 12 ವರ್ಷಬೇಕಾಗುತ್ತದೆ.
ಪುಷ್ಕರ ಎಂದರೆ ಏನು?
ಗುರು ಗ್ರಹವು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುತ್ತದೆ. ಈ ವೇಳೆ ಕೆಲ ನಿರ್ದಿಷ್ಟ ನದಿಗಳು ಸಕಲ ದೇವತೆಗಳ ಶಕ್ತಿಯನ್ನು ಪಡೆದುಕೊಳ್ಳುತ್ತವೆ. ಇದನ್ನು ಪುಷ್ಕರದ ಅವಧಿ ಎನ್ನಲಾಗುತ್ತದೆ. ಪುಷ್ಕರ ಎಂದರೆ ಜಲ ದೇವತೆ ಎಂದರ್ಥ. ಪುಷ್ಕರವಾದ ನದಿ 12 ದಿನಗಳವರೆಗೆ ದೈವೀಶಕ್ತಿ ಹೊಂದಿರುತ್ತದೆ. ಸಕಲ ಜೀವಿಗಳಿಗೆ ದೈವದತ್ತ ವರಗಳಲ್ಲಿ ನೀರು ಅತ್ಯಂತ ಶ್ರೇಷ್ಠವಾದದ್ದು. ನದಿ, ಸರೋವರಗಳು ದೇಶದ ಜೀವ ನಾಡಿಗಳು. ಪುರಾಣಗಳ ಪ್ರಕಾರ ತುಂದಿಲನೆಂಬ ಋಷಿ ಶಿವನನ್ನು ಕುರಿತು ತಪಸ್ಸು ಮಾಡಿ, ಶಿವನ ಅಂಶಗಳಲ್ಲಿ ಒಂದಾದ ನೀರೇ ಅಗಿ, ಪುಷ್ಕರ (ಜಲದೇವತೆ) ಎನಿಸಿಕೊಂಡರು.
ಬ್ರಹ್ಮ ಜಗತ್ತನ್ನು ಸೃಷ್ಟಿಸುವಾಗ ಈ ಪುಷ್ಕರನ ಹಾಗೆ ದೇವತೆಗಳ ಮತ್ತು ಬೃಹಸ್ಪತಿಯ (ಗುರು) ಸಹಾಯ ಪಡೆದರು. ಬ್ರಹ್ಮ, ಪುಷ್ಕರ ಮತ್ತು ಗುರು ಈ ಮೂವರಲ್ಲಿ ಆದ ನಿಯಮಿತ ಒಪ್ಪಂದದಂತೆ, ಗುರು ಗ್ರಹವು ನಿರ್ದಿಷ್ಟವಾದ ರಾಶಿಗಳನ್ನು ಪ್ರವೇಶಿಸಿದಾಗ ಪವಿತ್ರವಾದ 12 ನದಿಗಳಲ್ಲಿ ಒಂದೊಂದು ನದಿ ಪುಷ್ಕರವಾಗುತ್ತದೆ ಎನ್ನುತ್ತಾರೆ ವೇದಬ್ರಹ್ಮ ಡಾ. ಭಾನುಪ್ರಕಾಶ್ ಶರ್ಮಾ.
12 ದಿನಗಳು ಮಾಹಾ ಪರ್ವ ಕಾಲ:
12 ರಾಶಿಗಳಲ್ಲಿ ಗುರುವು ಯಾವ ದಿನ ಪ್ರವೇಶ ಮಾಡುತ್ತಾನೋ ಆ ದಿನದಿಂದ 12 ದಿನಗಳನ್ನು ಮಹಾಪರ್ವಕಾಲ ಎನ್ನುತ್ತಾರೆ. ಈ ದಿನಗಳಲ್ಲಿ ದೇವತೆಗಳು, ಸಪ್ತ ಖುಷಿಗಳು, ನವಕಾಂಡ ಖುಷಿಗಳು, ಎಲ್ಲ ಮಹರ್ಷಿಗಳು ನದಿಯಲ್ಲಿ ಸ್ನಾನ ಮಾಡಲು ಕುಂಭ ಮೇಳ ಮತ್ತು ಪುಷ್ಕರಣದ ದಿನಗಳಲ್ಲಿ ಭೂಲೋಕಕ್ಕೆ ಬರುತ್ತಾರೆಂಬ ಪ್ರತೀತಿ ಇದೆ. ಪುಷ್ಕರದಲ್ಲಿ ಅಗ್ನಿಪುರಾಣದಲ್ಲಿ ಹೇಳಿದಂತೆ 16 ಕೋಟಿ ತೀರ್ಥಗಳು ಭೂಲೋಕಕ್ಕೆ ಬಂದು ಇಡೀ ಪ್ರಪಂಚದಲ್ಲಿ ಸೃಷ್ಠಿಯಾದ ಎಲ್ಲ ಜೀವಿಗಳನ್ನು ಮತ್ತು ಮನುಷ್ಯರನ್ನು ಪವಿತ್ರಗೊಳಿಸುತ್ತವೆ ಎಂಬ ನಂಬಿಕೆಯೂ ಇದೆ.
ಸಾಧು-ಸಂತರು, ಗುರುಗಳು ಸ್ನಾನ ಮಾಡಿದ ನಂತರ ದೇವತೆಗಳನ್ನು ಕುಂಭದಲ್ಲಿ ಆವಾಹನೆ ಮಾಡಿ ಕಲಶಗಳನ್ನು ನೀರಲ್ಲಿ ಸ್ನಾನ ಮಾಡಿಸುತ್ತಾರೆ. ನಂತರ ಶಿಷ್ಯರು, ಭಕ್ತಾದಿಗಳು ನದಿಯಲ್ಲಿ ಸ್ನಾನ ಮಾಡಿ ಅಲ್ಲಿ ಸೇರುವ ಗುರುಗಳಿಗೆ ನಮಸ್ಕರಿಸುತ್ತಾರೆ ಎನ್ನುತ್ತಾರೆ ಶ್ರೀ ಶಂಕರ ಪರಮಾನಂದ ಟ್ರಸ್ಟ್‌ನ ಸಂಸ್ಥಾಪಕ ಸ್ವಾಮಿ ಗಣೇಶಸ್ವರೂಪಾನಂದಗಿರಿ ಸ್ವಾಮೀಜಿ.
ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಕಾವೇರಿ ನದಿ ಪುಷ್ಕರ ಮಹೋತ್ಸವವನ್ನು 12 ದಿನಗಳ ಕಾಲ ಶ್ರೀರಂಗಪಟ್ಟಣದಲ್ಲಿ ನಡೆಯಲಿದೆ. ದಕ್ಷಿಣ ಭಾರತದ ವಿವಿಧ ರಾಜ್ಯಗಳ 1 ಲಕ್ಷಕ್ಕೂ ಹೆಚ್ಚು ಜನರು ಈ ಪುಷ್ಕರಣೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಈ ಪುಷ್ಕರದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ನಮ್ಮ ಸಂಘದ ವತಿಯಿಂದ 12 ದಿನಗಳ ಕಾಲ ಉಚಿತ ಉಪಹಾರ, ಮಧ್ಯಾಹ್ನ ಉಚಿತ ಭೋಜನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಂಘದ ಉಸ್ತುವಾರಿ ಕಾರ್ಯದರ್ಶಿ ಜಿ.ಎಸ್. ಪ್ರಸನ್ನ ತಿಳಿಸಿದ್ದಾರೆ.
ಕಾರ್ಯಕ್ರಮದ ವಿವರ:
ಸೆ. 12 ರಿಂದ ಸೆ. 24ರ ವರೆಗೆ ಆಶ್ವೀಜ ಶುದ್ಧ ಚತುರ್ಥಿವರೆಗೆ ಶ್ರೀ ಕಾವೇರಿ ಪುಷ್ಕರಣೆ ನಡೆಯಲಿದೆ. ಸೆ. 18 ರಂದು ಸಂಜೆ 5ಗಂಟೆಗೆ ಗಂಜಾಂನ ಶ್ರೀ ನಿಮಿಷಾಂಬ ದೇವಸ್ಥಾನ ನದಿ ತಟದಲ್ಲಿ ಹಾಗೂ ಸೆ. 19 ರಂದು ಗಂಜಾಂನ ಘೋಸಾಯಿ ಘಾಟ್‍ನ ನದಿ ತಟದಲ್ಲಿ ಮತ್ತು ಸೆ. 23 ರಂದು ಹಿರೆಮಗಳೂರು ಕಣ್ಣನ್ ಪಟ್ಟಣದ ಕಾವೇರಿ ನದಿ ತೀರದಲ್ಲಿ ವಿಶೇಷವಾಗಿ ಕಾವೇರಿ ಪೂಜೆ ಮಹಾ ಆರತಿ ನೆರವೇರಿಸಲಿದ್ದಾರೆ.
No comments:
Post a Comment